1 الم

ಅಲಿಫ್ ಲಾಮ್ಮೀಮ್.


2تِلْكَ آيَاتُ الْكِتَابِ الْحَكِيمِ

ಇವು ಯುಕ್ತಿಪೂರ್ಣ ಗ್ರಂಥದ ಸೂಕ್ತಗಳು.


3هُدًى وَرَحْمَةً لِلْمُحْسِنِينَ

ಸದ್ಭಕ್ತರಿಗೆ ಮಾರ್ಗದರ್ಶನವೂ ಅನುಗ್ರಹವೂ ಆಗಿವೆ.


4الَّذِينَ يُقِيمُونَ الصَّلَاةَ وَيُؤْتُونَ الزَّكَاةَ وَهُمْ بِالْآخِرَةِ هُمْ يُوقِنُونَ

ಇವರು ನಮಾಝನ್ನು ಸಂಸ್ಥಾಪಿಸುವವರು ಝಕಾತ್ ಕೊಡುವವರು ಮತ್ತು ಪರಲೋಕದ ಮೇಲೆ ವಿಶ್ವಾಸವಿರಿಸುವವರಾಗಿದ್ದಾರೆ.


5أُولَٰئِكَ عَلَىٰ هُدًى مِنْ رَبِّهِمْ ۖ وَأُولَٰئِكَ هُمُ الْمُفْلِحُونَ

ಇವರೇ ತಮ್ಮ ಪ್ರಭುವಿನ ಕಡೆಯಿಂದ ಸನ್ಮಾರ್ಗದಲ್ಲಿದ್ದಾರೆ ಮತ್ತು ಇವರೇ ಯಶಸ್ಸು ಗಳಿಸುವವರಾಗಿದ್ದಾರೆ.


6وَمِنَ النَّاسِ مَنْ يَشْتَرِي لَهْوَ الْحَدِيثِ لِيُضِلَّ عَنْ سَبِيلِ اللَّهِ بِغَيْرِ عِلْمٍ وَيَتَّخِذَهَا هُزُوًا ۚ أُولَٰئِكَ لَهُمْ عَذَابٌ مُهِينٌ

ಜನರಲ್ಲಿ ಒಬ್ಬನು, ಜನರನ್ನು ಅಲ್ಲಾಹನ ಮಾರ್ಗದಿಂದ ಜ್ಞಾನ ರಹಿತವಾಗಿ ದಾರಿಗೆಡಿಸಲಿಕ್ಕಾಗಿ ಮತ್ತು ಈ ಮಾರ್ಗದ ಕಡೆಗಿರುವ ಕರೆಯನ್ನು ತಮಾಷೆಯಲ್ಲಿ ಹಾರಿಸಿಬಿಡಲಿಕ್ಕಾಗಿ ಮನಮೋಹಕವಾಣಿಯನ್ನು ಖರೀದಿಸಿ ತರುತ್ತಾನೆ. ಇಂತಹವರಿಗೆ ಬಹಳ ಅಪಮಾನಕರ ಯಾತನೆ ಇದೆ.


7وَإِذَا تُتْلَىٰ عَلَيْهِ آيَاتُنَا وَلَّىٰ مُسْتَكْبِرًا كَأَنْ لَمْ يَسْمَعْهَا كَأَنَّ فِي أُذُنَيْهِ وَقْرًا ۖ فَبَشِّرْهُ بِعَذَابٍ أَلِيمٍ

ಅವನಿಗೆ ನಮ್ಮ ಸೂಕ್ತಗಳನ್ನು ಓದಿ ಕೇಳಿಸಲಾದಾಗ ಅವನು ಅವುಗಳನ್ನು ತಾನು ಕೇಳಲೇ ಇಲ್ಲವೋ ಎಂಬಂತೆ, ಅವನ ಕಿವಿಗಳು ಕಿವುಡೋ ಎಂಬಂತೆ ದುರಹಂಕಾರದಿಂದ ಮುಖ ತಿರುಗಿಸಿ ಬಿಡುತ್ತಾನೆ. ಅವನಿಗೆ ಒಂದು ವೇದನಾಯುಕ್ತ ಯಾತನೆಯ ಸುವಾರ್ತೆ ಕೊಟ್ಟುಬಿಡಿರಿ.


8إِنَّ الَّذِينَ آمَنُوا وَعَمِلُوا الصَّالِحَاتِ لَهُمْ جَنَّاتُ النَّعِيمِ

ಆದರೆ, ಸತ್ಯವಿಶ್ವಾಸ ಸ್ವೀಕರಿಸುವವರಿಗೂ ಸತ್ಕರ್ಮವೆಸಗುವವರಿಗೂ ಅನುಗ್ರಹಗಳು ತುಂಬಿದ ಸ್ವರ್ಗೋದ್ಯಾನಗಳಿವೆ.


9خَالِدِينَ فِيهَا ۖ وَعْدَ اللَّهِ حَقًّا ۚ وَهُوَ الْعَزِيزُ الْحَكِيمُ

ಅವುಗಳಲ್ಲಿ ಅವರು ಸದಾ ಕಾಲ ವಾಸಿಸುವರು. ಇದು ಅಲ್ಲಾಹನ ದೃಢವಾದ ವಾಗ್ದಾನವಾಗಿದೆ ಮತ್ತು ಅವನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.


10خَلَقَ السَّمَاوَاتِ بِغَيْرِ عَمَدٍ تَرَوْنَهَا ۖ وَأَلْقَىٰ فِي الْأَرْضِ رَوَاسِيَ أَنْ تَمِيدَ بِكُمْ وَبَثَّ فِيهَا مِنْ كُلِّ دَابَّةٍ ۚ وَأَنْزَلْنَا مِنَ السَّمَاءِ مَاءً فَأَنْبَتْنَا فِيهَا مِنْ كُلِّ زَوْجٍ كَرِيمٍ

ಅವನು ನಿಮಗೆ ಕಾಣುವ ಸ್ತಂಭಗಳಿಲ್ಲದೆ ಆಕಾಶಗಳನ್ನು ಸೃಷ್ಟಿಸಿದನು. ಭೂಮಿಯು ನಿಮ್ಮ ಸಹಿತ ಉರುಳಿ ಬಿಡದಂತೆ ಅವನು ಅದರಲ್ಲಿ ಪರ್ವತಗಳನ್ನು ನಾಟಿದನು. ಅವನು ಎಲ್ಲ ತರದ ಪ್ರಾಣಿಗಳನ್ನು ಭೂಮಿಯಲ್ಲಿ ಹಬ್ಬಿಸಿಬಿಟ್ಟನು. ಆಕಾಶದಿಂದ ನೀರನ್ನು ಸುರಿಸಿದನು ಮತ್ತು ಭೂಮಿಯಲ್ಲಿ ತರತರದ ಉತ್ತಮ ವಸ್ತುಗಳನ್ನು ಮೊಳೆಯಿಸಿದನು.